ನಯಾಗರ ಜಲಪಾತ :-
ಉತ್ತರ ಅಮೆರಿಕದಲ್ಲಿ ಈರೀ ಸರೋವರದಲ್ಲಿ ಹುಟ್ಟಿ ಸ್ಥೂಲವಾಗಿ ಉತ್ತರಾಭಿಮುಖವಾಗಿ ಹರಿದು ಆಂಟೆರಿಯೋ ಸರೋವರವನ್ನು ಸೇರುವ, ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡ ದೇಶಗಳ ನಡುವೆ ಸ್ವಲ್ಪ ದೂರದ ಗಡಿಯಾಗಿರುವ ನದಿ; ಇದರ ಜಲಪಾತ. ನದಿಯ ಉದ್ದ 56 ಕಿಮೀ. ಇದು ಅಮೆರಿಕ ಸಂಯುಕ್ತ ಸಂಸ್ಥಾನಗಳ ನ್ಯೂಯಾರ್ಕ್ ರಾಜ್ಯವನ್ನು ಕೆನಡದ ಆಂಟೆರಿಯೋ ಪ್ರಾಂತ್ಯದಿಂದ ಪ್ರತ್ಯೇಕಿಸುತ್ತದೆ. ಪಂಚ ಮಹಾಸರೋವರಗಳ ಪೈಕಿ ನಾಲ್ಕಕ್ಕೆ-ಸುಪೀರಿಯರ್, ಮಿಷಿಗನ್, ಹ್ಯುರಾನ್, ಈರೀ ಇವಕ್ಕೆ- ಹೊರ ಹರಿವಿನ ತೂಬಿನಂತಿರುವ ಈ ನದಿ ಈರೀ ಸರೋವರವನ್ನು ಬಿಟ್ಟು ಸುಮಾರು 8 ಕಿಮೀ. ದೂರ ಹರಿದು ಎರಡು ಕವಲುಗಳಾಗಿ ಒಡೆಯುತ್ತದೆ. ಈ ಕವಲುಗಳ ನಡುವೆ ಇರುವ ದ್ವೀಪಗಳು ಸ್ಟ್ರಾಬೆರಿ ಮತ್ತು ಗ್ರ್ಯಾಂಡ್ ಐಲೆಂಡ್. ಪೂರ್ವದ ಕವಲು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 24 ಕಿಮೀ. ದೂರವೂ ಪಶ್ಚಿಮದ ಕವಲು ಕೆನಡದಲ್ಲಿ ಸುಮಾರು 19 ಕಿಮೀ. ದೂರವೂ ಹರಿದು ಗ್ರ್ಯಾಂಡ್ ಐಲೆಂಡ್ ದ್ವೀಪದ ಕೆಳಭಾಗದಲ್ಲಿ ಹಾಗೂ ನಯಾಗರ ಜಲಪಾತಕ್ಕೆ ಸುಮಾರು 5 ಕಿಮೀ. ದೂರದಲ್ಲಿ ಒಂದಾಗುತ್ತದೆ. ನಯಾಗರ ನದಿ ಕ್ರಮಿಸುವ ದೂರದಲ್ಲಿ ಸುಮಾರು ಅರ್ಧದಷ್ಟು ಸಾಗಿದ ಮೇಲೆ ಅದು ಸು.51 ಮೀ. ಕೆಳಕ್ಕೆ ದುಮುಕುತ್ತದೆ. ಇದೇ ಜಗತ್ ಪ್ರಸಿದ್ಧವಾದ ನಯಾಗರ ಜಲಪಾತ. ಇದಕ್ಕಿಂತ ಎತ್ತರದ ಜಲಪಾತಗಳು ಪ್ರಪಂಚದಲ್ಲಿ ಅನೇಕ ಉಂಟು. ಆದರೆ ಇದರ ಅಗಲ ಹಾಗೂ ಅಗಾಧ ಜಲರಾಶಿಯಿಂದಾಗಿ ಇದು ಅದ್ಭುತವೂ ಸುಂದರವೂ ಆದ ಜಲಪಾತವಾಗಿ ಪರಿಣಮಿಸಿದೆ.

	ಈರೀ ಸರೋವರದಿಂದ ಇಳಿಜಾರಿನ ಹರಿವಿನವರೆಗೆ ನದಿ ಜಲಯಾನಕ್ಕೆ ಅನುಕೂಲವಾಗಿದೆ. ಹಿಮಗಾಲದಲ್ಲಿ ಈರೀ ಸರೋವರದ ನೀರು ಗಡ್ಡೆಗಟ್ಟಿ ನಯಾಗರ ನದಿಯೊಳಕ್ಕೆ ಮಂಜುಗಡ್ಡೆಗಳು ತೇಲಿಬರುವುದರಿಂದ ನದಿಯ ಹರಿವಿಗೆ ಅಡಚಣೆಯಾಗುತ್ತದೆ. ಇದನ್ನು ನಿವಾರಿಸಲು ನದಿಯ ದ್ವಾರಕ್ಕೆ ಅಡ್ಡಲಾಗಿ ಡಿಸೆಂಬರ್‍ನಿಂದ ಏಪ್ರಿಲ್‍ವರೆಗೆ ತೇಲುದಿಮ್ಮಿಗಳನ್ನು ಹಾಕುತ್ತಾರೆ.

	ನಯಾಗರ ಜಲಪಾತದ ಸೌಂದರ್ಯವನ್ನು ರಕ್ಷಿಸುವ ಉದ್ದೇಶದಿಂದ ಸಾಕಷ್ಟು ಪರಿಮಾಣದ ನೀರನ್ನು ಜಲಪಾತದಲ್ಲಿ ಹರಿಸಲು ಕೆನಡ ಮತ್ತು ಅಮೆರಿಕ ದೇಶಗಳು 1950ರಲ್ಲಿ ಒಪ್ಪಂದ ಮಾಡಿಕೊಂಡಿವೆ. ನಿಗದಿಯಾದ ಪರಿಮಾಣದಲ್ಲಿ ಜಲಪಾತಕ್ಕೆ ಬಿಡಬೇಕಾದ್ದಲ್ಲದೆ ಉಳಿದ ನೀರನ್ನು ಜಲವಿದ್ಯುಚ್ಛಕ್ತಿಯ ಉತ್ಪಾದನೆಗೆ ಅಮೆರಿಕ ಮತ್ತು ಕೆನಡ ದೇಶಗಳೆರಡೂ ಸಮವಾಗಿ ಹಂಚಿಕೊಂಡಿವೆ. ನಯಾಗರ ನದಿಯಿಂದ ಉತ್ಪಾದನೆಯಾಗುವ ವಿದ್ಯುಚ್ಛಕ್ತಿಯ ಒಟ್ಟು ಪರಿಮಾಣ ಸುಮಾರು 40,00,000 ಕಿವಾ. ಇಲ್ಲಿ ಉತ್ಪಾದನೆಯಾಗುವ ವಿದ್ಯುಚ್ಛಕ್ತಿಯ ಬಹುಭಾಗವನ್ನು ಸಮೀಪದ ನಗರಗಳ ಕೈಗಾರಿಕೆಗಳಿಗೆ ಬಳಸುತ್ತಿದ್ದಾರೆ.

	ನಯಾಗರ ಜಲಪಾತಕ್ಕೆ ಎರಡು ಕವಲುಗಳಿವೆ. ಇವೆರಡರ ನಡುವೆ ಇರುವ ನೆಲ ಗೋಟ್ ಐಲೆಂಡ್. ಕೆನಡದ ಕಡೆಯದು ಎಡ ಕವಲು. ಇದು ದೊಡ್ಡದು. ಇದಕ್ಕೆ ಹಾರ್ಸ್ ಷೂ ಜಲಪಾತ ಎನ್ನುತ್ತಾರೆ. ಇದರ ಎತ್ತರ ಸುಮಾರು 49 ಮೀ. ಬಲ ಕವಲು ಅಮೆರಿಕದ ಕಡೆಯದು. ಇದರ ಎತ್ತರ 51 ಮೀ. ಜಲಪಾತದ ತಳಭಾಗದಲ್ಲಿ ಸುಮಾರು 11 ಕಿಮೀ ಉದ್ದದ ಕಮರಿಯಿದೆ.

	ಜಲಪಾತದ ನೀರು ತಿಳಿಯಾಗಿದೆ. ನೀರಿನಲ್ಲಿ ಗಷ್ಟು ಕಂಡುಬರುವುದಿಲ್ಲ. ಈ ಪರಿಶುದ್ಧತೆಯಿಂದಾಗಿಯೂ ಜಲಪಾತ ಸೊಬಗಾಗಿದೆ. ಜಲಪಾತಕ್ಕಿರುವ ಪ್ರಾಮುಖ್ಯವನ್ನು ಗ್ರಹಿಸಿ ಕೆನಡದಲ್ಲೂ ಅಮೆರಿಕದಲ್ಲೂ ಜಲಪಾತದ ಅಂಚಿನ ಭೂಮಿಗಳಲ್ಲಿ ಸಾರ್ವಜನಿಕ ಪಾರ್ಕುಗಳನ್ನು ನಿರ್ಮಿಸಲಾಗಿದೆ.

	ಕೆನಡ ಭಾಗದ ಕ್ವೀನ್ ವಿಕ್ಟೋರಿಯ ಪಾರ್ಕ್, ಅಮೆರಿಕದ ಕಡೆಯ ಪ್ರಾಸ್ಟೆಕ್ಟ್ ಪಾಯಿಂಟ್, ಜಲಪಾತದ ಎದುರಿಗೆ ಕಮರಿಗೆ ಅಡ್ಡಲಾಗಿ ಕಟ್ಟಿರುವ ರೇನ್‍ಬೋ ಬ್ರಿಡ್ಜ್- ಈ ಸ್ಥಳಗಳಿಂದ ಜಲಪಾತದ ನೋಟ ಅತ್ಯಂತ ಮನೋಹರವಾದ್ದು. ಜಲಪಾತವನ್ನು ನೋಡಲು ಬಂದವರು ಅಮೆರಿಕಕ್ಕೆ ಸೇರಿದ ನದಿಯ ದಂಡೆಯಿಂದ ಗೋಟ್ ಐಲೆಂಡ್ ದ್ವೀಪಕ್ಕೆ ನಡೆಸೇತುವೆಯ ಮೂಲಕ ಬಂದು, ಅಲ್ಲಿಂದ ಜಲಪಾತದ ತಳಕ್ಕೆ ಎಲಿವೇಟರ್ ಮೂಲಕ ಸಾಗಿ, ಜಲಪಾತದಿಂದ ಕಮರಿಗೆ ಬೀಳುವ ನೀರಿನ ಪದರದ ಹಿಂದಿರುವ ಕೇವ್ ಆಫ್ ದಿ ವಿಂಡ್ ಗುಹೆಯನ್ನು ನೋಡಬಹುದು.					(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ